Yatnal-Lakshmi Hebbalkar: ಯತ್ನಾಳ್ ನಾಲಿಗೆಗೂ, ತಲೆಗೂ ಕನೆಕ್ಷನ್ ತಪ್ಪಿದೆ! ಲಕ್ಷ್ಮಿ ಹೆಬ್ಬಾಳ್ಕರ್ ನೇರಾನೇರ ವಾಗ್ದಾಳಿ


 ಳಗಾವಿ: ವಿಜಯಪುರ ಶಾಸಕ ಯತ್ನಾಳ್ (Yatnal) ಉಚ್ಛಾಟನೆ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ. ಅತ್ತ ಯತ್ನಾಳ್‌ ಕೂಡಾ ಇಂದು ಬಿಜೆಪಿಯಿಂದ (BJP) ಉಚ್ಛಾಟನೆಗೊಂಡ ಬಳಿಕ ಮೊದಲ ಬಾರಿಗೆ ವಿಜಯಪುರಕ್ಕೆ ಆಗಮಿಸಿ ಪ್ರಸಿದ್ಧ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಆ ಬಳಿಕ ಮಾತನಾಡಿದ ಯತ್ನಾಳ್‌, ಮಾಜಿ ಸಿಎಂ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ಈ ವೇಳೆ ವಿಜಯೆಂದ್ರ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾನೆ. ನಿನ್ನ ತಂದೆಯ ಹಗರಣ ಬಯಲು ಮಾಡುತ್ತೇನೆ ಎಂದು ವಿಜಯೆಂದ್ರಗೆ (Vijayendra) ಕಾಂಗ್ರೆಸ್ ಎಚ್ಚರಿಕೆ ನೀಡಿದೆ. ಹೀಗಾಗಿ ವಿಜಯೆಂದ್ರ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದ್ದಾನೆ ಎಂದು ಆರೋಪ ಮಾಡಿದ್ದರು. ಇದೀಗ ಈ ಹೇಳಿಕೆಗೆ ಕಾಂಗ್ರೆಸ್ ಸಚಿವೆ ಯತ್ನಾಲ್‌ ವಿರುದ್ಧ ನೇರಾನೇರ ವಾಗ್ದಾಳಿ ನಡೆಸಿದ್ದಾರೆ.


ಯತ್ನಾಳ್‌ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ!


ಬೆಳಗಾವಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಯತ್ನಾಳ್‌ ನಾಲಿಗೆ ಮತ್ತು ತಲೆಗೆ ಕನೆಕ್ಷನ್ ತಪ್ಪಿದೆ ಎಂದು ಹೇಳಿದ್ದಾರೆ. ಬಿಜೆಪಿ ಕಾಂಗ್ರೆಸ್‌ ನಡುವೆ ಹೊಂದಾಣಿಕೆ ಇದೆ ಎಂಬ ಯತ್ನಾಳ್‌ ಹೇಳಿಕೆಗೆ ಸಂಬಂಧಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ನಾಲಿಗೆ ಹರಿಬಿಟ್ಟಿದಕ್ಕೆ ಬಿಜೆಪಿಯಲ್ಲಿ ಯತ್ನಾಳರನ್ನ ಉಚ್ಛಾಟನೆ ಮಾಡಿದ್ದಾರೆ. ನಮ್ಮ ಸಮಾಜದವರು ಅಂತಾ ನಾವು ನಮ್ಮ ಚೌಕಟ್ಟಿನಲ್ಲಿ ಅವರಿಗೆ ಗೌರವ ಕೊಡ್ತೀವಿ. ಆದರೆ, ಯತ್ನಾಳ್‌ ಮಾತನಾಡೋ ರೀತಿ ನೋಡಿದ್ರೆ ಅವರ ನಾಲಿಗೆಗೆ ತಲೆಗೆ ಕನೆಕ್ಷನ್ ತಪ್ಪಿದೆ ಅನಿಸುತ್ತೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.


ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೊಸ ಪಕ್ಷ ಕಟ್ಟುವ ವಿಚಾರದ ಬಗ್ಗೆ ಮಾತನಾಡಿದ ಸಚಿವೆ, ಯತ್ನಾಳರಿಗೆ ಒಳ್ಳೆಯದಾಗಲಿ ,ಭಗವಂತನ ಆಶೀರ್ವಾದ ಇರಲಿ. ಆದಷ್ಟು ಬೇಗ ಹೊಸ ಪಕ್ಷ ಕಟ್ಟಿ ರಾಜ್ಯದಲ್ಲಿ ಸಂಘಟನೆ ಮಾಡಲಿ ಎಂದರು.

ಪಂಚಮಸಾಲಿಗಳನ್ನ ಯತ್ನಾಳಗೆ ಬರೆದುಕೊಟ್ಟಿಲ್ಲ; ಲಕ್ಷ್ಮೀ ಹೆಬ್ಬಾಳ್ಕರ್


ಯತ್ನಾಳ್‌ ಉಚ್ಚಾಟನೆಗ ವಿಚಾರಕ್ಕೆ ಪಂಚಮಸಾಲಿ ‌ಶ್ರೀಗಳಿಂದ ಏಪ್ರಿಲ್ 13ಕ್ಕೆ ಹೋರಾಟದ ಬಗ್ಗೆ ಮಾತನಾಡಿದ ಸಚಿವೆ, ಪಂಚಮಸಾಲಿ ಶ್ರೀಗಳು ಪ್ರೆಸ್‌ಮೀಟ್ ಮಾಡಿರೋದನ್ನ ನಾನು ನೋಡಿರುವೆ. ಅದರಲ್ಲಿ 80ರಷ್ಟು ಪಂಚಮಸಾಲಿಗಳು ಬಿಜೆಪಿಯಲ್ಲಿ ಅಂತಾ ಹೇಳಿದ್ದಾರೆ. ಇದು ನಮ್ಮ ‌ಮನಸ್ಸಿಗೆ ನೋವಾಗಿದೆ. ಪಂಚಮಸಾಲಿ ಹೋರಾಟದಲ್ಲಿ ಪಕ್ಷಾತೀತವಾಗಿ ಎಲ್ಲ ಪಕ್ಷದವರು ಸೇರಿಕೊಂಡು ನಾವೆಲ್ಲರೂ ಹೋರಾಟ ಮಾಡಿದ್ದೇವೆ. ಶ್ರೀಗಳು ಈ ರೀತಿ ಮಾತನಾಡಬಾರದಿತ್ತು. ಪಂಚಮಸಾಲಿಗಳನ್ನ ಯತ್ನಾಳಗೆ ಬರೆದುಕೊಟ್ಟಿಲ್ಲ. ಶ್ರೀಗಳ ಹೋರಾಟ ಅದು ವೈಯಕ್ತಿಕ ವಿಚಾರವಾಗುತ್ತೆ. ನಾನು ಕಾಂಗ್ರೆಸ್ ‌ನವಳು ಅವರಿಗೆ ಬೆಂಬಲ ಕೊಡೊದಕ್ಕೆ ಸಾಧ್ಯವಾ? ಸಮಾಜವೇ ಬೇರೆ, ಪಕ್ಷದ ವಿಚಾರವೇ ಬೇರೆ ಎಂದು ಪಂಚಮಸಾಲಿ ಶ್ರೀಗಳ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.


(ವರದಿ: ಚಂದ್ರಕಾಂತ್ ಸುಗಂಧಿ, ನ್ಯೂಸ್‌18 ಕನ್ನಡ ಬೆಳಗಾವಿ)


ಹೊಸ ಪಕ್ಷಕ್ಕೆ ಮುಹೂರ್ತ ಫಿಕ್ಸ್! ಮತ್ತೊಂದು ಬಾಂಬ್ ಸಿಡಿಸಿದ ಯತ್ನಾಳ್


ವಿಜಯಪುರ: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಅವರು ಉಚ್ಛಾಟನೆಯನ್ನೇ ಸವಾಲಾಗಿ ಸ್ವೀಕರಿಸಿ ಇದೀಗ ಹೊಸ ಪಕ್ಷದ ಸ್ಥಾಪನೆ ಮಾಡುವುದಾಗಿ ಗುಡುಗಿದ್ದಾರೆ. ಬಿಜೆಪಿಯಿಂದ (BJP) ಉಚ್ಛಾಟನೆಗೊಂಡ ಬಳಿಕ ಮೊದಲ ಬಾರಿಗೆ ವಿಜಯಪುರಕ್ಕೆ ಆಗಮಿಸಿದ ಯತ್ನಾಳ್ ಪ್ರಸಿದ್ಧ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.


ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುತ್ತೇನೆ. ಒಂದು ವೇಳೆ ಹೊಸ ಪಕ್ಷ ಬೇಕು ಅಂದ್ರೆ ಹೊಸ ಪಕ್ಷ ಕಟ್ಟುತ್ತೇನೆ. ಬಿಜೆಪಿಯಿಂದ ಹಿಂದೂಗಳ ರಕ್ಷಣೆ ಆಗಲ್ಲ. ಆದ್ದರಿಂದ ಹಿಂದೂಗಳ ರಕ್ಷಣೆಗೆ ಹೊಸ ಪಕ್ಷ ಕಟ್ಟುವ ಅನಿವಾರ್ಯತೆ ಬಂದಿದೆ ಎಂದು ಹೇಳಿದ್ದಾರೆ.


ವಿಜಯದಶಮಿ‌ ದಿನ ಹೊಸ ಪಕ್ಷ ಉದಯವಾಗಲಿದೆ. ರಾಜ್ಯದಲ್ಲಿ ನನ್ನ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಬೇರೆ ದೇಶದಿಂದಲೂ ಕನ್ನಡಿಗರು ಕರೆ ಮಾಡಿದ್ದರು‌. ಹೊಸ ಪಕ್ಷ ಮಾಡಿದರೆ ಬೆಂಬಲ ನೀಡೋದಾಗಿ ಹೇಳಿದ್ದಾರೆ. ಹಲವಾರ ದೇಣಿಗೆ ಕೊಡಲು ಮುಂದಾಗಿದ್ದಾರೆ‌ ಎಂದು ಹೊಸ ಪಕ್ಷದ ಮುಗೂರ್ತವನ್ನೂ ಬಿಚ್ಚಿಟ್ಟಿದ್ದಾರೆ.

Post a Comment

Previous Post Next Post