Waqf Amendment Bill: ಲೋಕಸಭೆಯಲ್ಲಿ ಮಸೂದೆ ಮಂಡನೆ; ಇದು ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ- ಕೇಂದ್ರ ಸರ್ಕಾರ


 ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ಮಸೂದೆಯನ್ನು ಮಂಡಿಸಿದ್ದು, 1995ರಲ್ಲಿ ಈ ಮಸೂದೆಯನ್ನು ಪರಿಚಯಿಸಿದಾಗ ಯಾರು ವಿರೋಧಿಸಿರಲಿಲ್ಲ. ಈಗ ನಾವು ತಿದ್ದುಪಡಿ ಮಾಡಿದಾಕ್ಷಣ ಅಸಂವಿಧಾನಿಕ ಎಂದು ಅರಚುತ್ತಿದ್ದಾರೆ ಎಂದರು.

 ನವದೆಹಲಿ: ಭಾರೀ ವಿವಾದಕ್ಕೆ ಕಾರಣವಾಗಿರುವ ವಕ್ಫ್ ತಿದ್ದುಪಡಿ ವಿಧೇಯಕವನ್ನು ಬುಧವಾರ ಲೋಕಸಭೆಯಲ್ಲಿ ಮಂಡನೆ ಮಾಡಲಾಗಿದ್ದು, ತಿದ್ದುಪಡಿ ಮಸೂದೆಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ಮಸೂದೆಯನ್ನು ಮಂಡಿಸಿದ್ದು, ಈ ಮಸೂದೆಯು ವಕ್ಫ್ ಆಸ್ತಿಗಳ ಆಡಳಿತವನ್ನು ಸುಧಾರಿಸಲು, ತಂತ್ರಜ್ಞಾನ ಆಧಾರಿತ ನಿರ್ವಹಣೆಯನ್ನು ಪರಿಚಯಿಸಲು, ಸಂಕೀರ್ಣತೆಗಳನ್ನು ಪರಿಹರಿಸಲು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ನಡೆಸಿದ ಸಮಾಲೋಚನಾ ಪ್ರಕ್ರಿತೆಯು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿಯೇ ಅತಿದೊಡ್ಡ ಪ್ರಕ್ರಿಯೆಯಾಗಿದೆ.

ಈ ವಿಚಾರವಾಗಿ 25 ರಾಜ್ಯಗಳ ವಕ್ಫ್‌ ಬೋರ್ಡ್‌ಗಳ ಅಭಿಪ್ರಾಯ ಕೇಳಲಾಗಿದೆ. ಮಸೂದೆ ಕುರಿತು 96ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದೇವೆ. 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಕ್ಫ್ ಮಂಡಳಿಗಳ ಜೊತೆಗೆ 284 ನಿಯೋಗಗಳು ಮಸೂದೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿವೆ. ಕಾನೂನು ತಜ್ಞರು, ದತ್ತಿ ಸಂಸ್ಥೆಗಳು, ಶಿಕ್ಷಣ ತಜ್ಞರು ಮತ್ತು ಧಾರ್ಮಿಕ ಮುಖಂಡರು ಸೇರಿದಂತೆ ಇತರರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದ್ದಾರೆ. ಈ ಮಸೂದೆ ಬಗ್ಗೆ ನಡೆದಷ್ಟು ಚರ್ಚೆ ಯಾವುದರಲ್ಲಿಯೂ ನಡೆದಿಲ್ಲ. ಸಂಸದೀಯ ಜಂಟಿ ಸಮಿತಿಯಲ್ಲೂ ವಿಧೇಯಕದ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ಯಾವುದೇ ಧಾರ್ಮಿಕ ಸಂಸ್ಥೆಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಈ ಮಸೂದೆಯು ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಆದರೆ, ವಕ್ಫ್ ಆಸ್ತಿಗಳೊಂದಿಗೆ ಮಾತ್ರ ವ್ಯವಹರಿಸುತ್ತದೆ. ಮಸೂದೆಯ ಪ್ರಕಾರ, ಯಾವುದೇ ಕಾನೂನಿನ ಅಡಿಯಲ್ಲಿ ಮುಸ್ಲಿಮರು ರಚಿಸಿದ ಟ್ರಸ್ಟ್‌ಗಳನ್ನು ಇನ್ನು ಮುಂದೆ ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ, ಇದು ಟ್ರಸ್ಟ್‌ಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಖಚಿತಪಡಿಸುತ್ತದೆ. ಮುಸ್ಲಿಮರು (ಕನಿಷ್ಠ ಐದು ವರ್ಷಗಳ ಕಾಲ) ಮಾತ್ರ ತಮ್ಮ ಆಸ್ತಿಯನ್ನು ವಕ್ಫ್‌ಗೆ ಅರ್ಪಿಸಬಹುದು, 2013 ರ ಪೂರ್ವದ ನಿಯಮಗಳನ್ನು ಪುನಃಸ್ಥಾಪಿಸಬಹುದು. ಆಸ್ತಿ ವಕ್ಫ್ ಎಂದು ಘೋಷಣೆಯಾಗುವುದಕ್ಕೂ ಮುನ್ನ ವಿಧವೆಯರು, ವಿಚ್ಛೇದಿತ ಮಹಿಳೆಯರು ಹಾಗೂ ಅನಾಥರು ಉತ್ತರಾಧಿಕಾರ ಪಡೆಯಬೇಕು. ವಕ್ಫ್ ಎಂದು ಹೇಳಲಾದ ಸರ್ಕಾರಿ ಆಸ್ತಿಗಳನ್ನು ಕಲೆಕ್ಟರ್ ಹುದ್ದೆಗಿಂತ ಮೇಲಿನ ಅಧಿಕಾರಿಯೊಬ್ಬರು ತನಿಖೆ ನಡೆಸಬೇಕೆಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ವಿವಾದಗಳಿದ್ದಲ್ಲಿ, ಆಸ್ತಿ ವಕ್ಫ್‌ಗೆ ಸೇರಿದೆಯೇ ಅಥವಾ ಸರ್ಕಾರಕ್ಕೆ ಸೇರಿದೆಯೇ ಎಂಬುದರ ಕುರಿತು ಹಿರಿಯ ಸರ್ಕಾರಿ ಅಧಿಕಾರಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ವಕ್ಫ್ ನ್ಯಾಯಮಂಡಳಿಗಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಇದು ಬದಲಾಯಿಸುತ್ತದೆ. ಅಲ್ಲದೆ, ಮುಸ್ಲಿಮೇತರ ಸದಸ್ಯರನ್ನು ಕೇಂದ್ರ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಸೇರಿಸಲಾಗುತ್ತದೆ.

Post a Comment

Previous Post Next Post